ಉದಕಮಂಡಲ: ತಮಿಳುನಾಡಿನಲ್ಲಿರುವ ಒಂದು ಗಿರಿಧಾಮ. ನೀಲಗಿರಿ ಜಿಲ್ಲೆಯ ಮುಖ್ಯ ಕೇಂದ್ರ. ಉ. ಅಕ್ಷಾಂಶ 11º.24'  ಮತ್ತು ಪು.ರೇ 76º.44' ಹಿಂದೆ ಇದು ಮದ್ರಾಸ್ ಸರ್ಕಾರದ ಬೇಸಿಗೆ ರಾಜಧಾನಿಯಾಗಿತ್ತು. ಜನಸಂಖ್ಯೆ (9321) (2001). ಊಟಿ ಎಂಬುದು ಇದರ ಇನ್ನೊಂದು ಹೆಸರು. ಮೈಸೂರಿನಿಂದ ದಕ್ಷಿಣಕ್ಕೆ 104 ಕಿ.ಮೀ. ದೂರದಲ್ಲಿ, ಸಮುದ್ರ ಮಟ್ಟದಿಂದ 2.134ಮೀ ಎತ್ತರದಲ್ಲಿದೆ. 2,634 ಮೀ ಎತ್ತರವಿರುವ ದೊಡ್ಡ ಬೆಟ್ಟದ ಎರಡು ಅಂಚುಗಳ ನಡುವೆ ಇರುವ ಈ ಊರಿನ ಸರಾಸರಿ ವಾರ್ಷಿಕ ಉಷ್ಣತೆ 14.4 ಸೆಂ. ಕನಿಷ್ಠ ಉಷ್ಣತೆ 9º ಸೆಂ. ವರ್ಷದಲ್ಲಿ ಬಹುಕಾಲ ಇಲ್ಲಿ ಹಗಲಿನ ಉಷ್ಣತೆ 16.7º-12.2ºಯ ಒಳಗಿರುತ್ತದೆ. ದೇಶ ವಿದೇಶಗಳ ಪ್ರವಾಸಿಗರನ್ನು ವಿಶೇಷತಃ ಆಕರ್ಷಿಸಿರುವ ಈ ಊರು ಗಿರಿಧಾಮಗಳ ರಾಣಿಯೆಂದು ಪ್ರಸಿದ್ಧ. ವಿಶಾಲ ಬೀದಿಗಳಿಂದಲೂ ಗಿಡ ಮರಗಳಿಂದಲೂ ಕೂಡಿದ ಈ ಊರೇ ಒಂದು ದೊಡ್ಡ ಉದ್ಯಾನವನದಂತಿದೆ. ಬ್ರಿಟಿಷರು ಭಾರತವನ್ನಾಳುತ್ತಿದ್ದಾಗ ಕಟ್ಟಿದ ಕೆಲವು ಕಟ್ಟಡಗಳ ಪೈಕಿ ಸೇಂಟ್ ಥಾಮಸ್ ಚರ್ಚು, ಸೇಂಟ್ ಸ್ಟೀಫನ್ ಚರ್ಚು ಮತ್ತು ಸ್ಟೋನ್ ಹೌಸ್ ಇವು ಮುಖ್ಯ.

ಇಲ್ಲಿರುವ ಮುಕೇರ್ತಿ ಅಣೆಕಟ್ಟು, ಪೈಕಾರ ಜಲವಿದ್ಯುತ್ ಕೇಂದ್ರ, ಚೈರನ್ಬೆಟ್ಟ ಮತ್ತು ಬೊಟಾನಿಕಲ್ ಗಾರ್ಡನ್ಗಳೇ ಅಲ್ಲದೆ ಕಾಫಿ ಮತ್ತು ಚಹ ತೋಟಗಳೂ ಬ್ರಿಟಿಷರು ನಿರ್ಮಿಸಿದ (1823-25) 4 ಕಿ.ಮೀ. ಉದ್ದದ ಸರೋವರವೂ ಇಲ್ಲಿಗೆ ಸಮೀಪದಲ್ಲೇ ಇರುವ ಕಲಹಟ್ಟಿ ಜಲಪಾತವೂ ಅಸಂಖ್ಯಾತ ಪ್ರವಾಸಿಗರನ್ನು ವರ್ಷವರ್ಷವೂ ಆಕರ್ಷಿಸುತ್ತವೆ. ಇಲ್ಲಿ ಒಂದು ಸರ್ಕಾರಿ ಕಾಲೇಜು ಖಾಸಗಿ ಕಾಲೇಜು 32 ಕಿ.ಮೀ. ದೂರದಲ್ಲಿ ಕ್ವಿನೈನ್ ಕಾರ್ಖಾನೆಯೂ ಇವೆ.

ನೀಲಗಿರಿ ಬೆಟ್ಟಗಳ ಆದಿವಾಸಿಗಳು ತೋಡರು. ಇವರು ಇಂದಿಗೂ ತಮ್ಮ ಹಳೆಯ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ.

ಕೂನೂರು, ಕೆಟ್ಟಿ, ಕೊಟ್ಟಗಿರಿ ಮತ್ತು ವೆಲಿಂಗ್ಟನ್ಗಳು ಊಟಿಯ ಸಮೀಪದಲ್ಲಿರುವ ಇತರ ಗಿರಿಧಾಮಗಳು.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ